ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸ೦ದರ್ಶನ
Share
ಕುಣಿಯುವ ನವಿಲಿಗೆ ಪದ್ಮಶ್ರೀ ಗೆಜ್ಜೆ

ಲೇಖಕರು :
ವಿಠ್ಠಲ ಭ೦ಡಾರಿ
ಬುಧವಾರ, ಫೆಬ್ರವರಿ 5 , 2014

ಕುಮಾರವ್ಯಾಸ ಹಾಡಿದನೆಂದರೆ
ಕಲಿಯುಗ ದ್ವಾಪರವಾಗುವುದು


ಇದು ಕುವೆಂಪು ಗದುಗಿನ ಭಾರತ ಓದಿ ಬರೆದ ಕವಿತೆ. ಹಾಗೆಯೇ ಚಿಟ್ಟಾಣಿಯವರು ಕುಣಿದರೆಂದರೆ ದ್ವಾಪರ, ತ್ರೇತಾಯುಗ ಇತ್ಯಾದಿ ಎಲ್ಲಾ ಯುಗಗಳು 4 ಕಂಬದ ರಂಗಸ್ಥಳದ ಮೇಲೆ ಸೃಷ್ಟಿಗೊಳ್ಳುವುದರಲ್ಲಿ ಅನುಮಾನವಿಲ್ಲ. ನಿಂತ ಸ್ಥಳವನ್ನೇ ಬಣ್ಣ ಬೆಡಗಿನ ಲೋಕವಾಗಿ ಮರುಸೃಷ್ಟಿಗೊಳಿಸಬಲ್ಲ ಶಕ್ತಿ ಇರುವುದು ಚಿಟ್ಟಾಣಿ ರಾಮಚಂದ್ರ ಹೆಗಡೆಯವರ ಕುಣಿತಕ್ಕೆ. ಒಂದರ್ಥದಲ್ಲಿ ಯಕ್ಷಗಾನ ರಂಗದ ಮಂತ್ರವಾದಿ ಇವರು. ನೀಲಗಗನದೊಳು ನವಿಲು ಕುಣಿಯುತಿದೆ ನೋಡು ಎಂದು ನವಿಲು ಕುಣಿತಕ್ಕೆ ಪ್ರಾರಂಭಿಸಿದರೆ ಶೃಂಗಾರ ರಸ ಸಾಕಾರಗೊಳ್ಳುತ್ತದೆ. ನೋಡಿರಿ ಧರ್ಮಜ ಪಲುಗುಣಾದಿಗಳೇ ಎಂದು ಗದಾಯುದ್ಧದಲ್ಲಿ ಭೀಮ ಬಿದ್ದ ಖುಶಿಗೆ ಕೌರವ ಪಡುವ ಸಂಭ್ರಮದ ಕುಣಿತ ರನ್ನನ ಇಡೀ ಕಾವ್ಯವನ್ನೇ ಮತ್ತೊಮ್ಮೆ ನೆನಪಿಸುತ್ತದೆ. ಕೌರವನ ಪಾತ್ರವಂತೂ ರನ್ನನ ಕಾವ್ಯದ ಒಂದು ಸಾರ್ಥಕ ಮರು ಸೃಷ್ಟಿಯೇ ಆಗಿದೆ.

ಪದ್ಮಶ್ರೀ ಗೌರವಕ್ಕಾಗಿ ಇವರನ್ನು ಆಯ್ಕೆ ಮಾಡಿಕೊಂಡಿರುವ ಆಯ್ಕೆ ಸಮಿತಿಯನ್ನು ಖಂಡಿತವಾಗಿಯೂ ಅಭಿನಂದಿಸಲೇ ಬೇಕು. ಇತ್ತೀಚಿಗಂತೂ ಸಕರ್ಾರ ನೀಡುವ ಪ್ರಶಸ್ತಿ-ಪುರಸ್ಕಾರಗಳೆಲ್ಲವೂ ಅಪಮೌಲ್ಯಗೊಳ್ಳುತ್ತಿರುವಾಗ ಚಿಟ್ಟಾಣಿಯವರಿಗೆ ಪ್ರಶಸ್ತಿ ನೀಡಿದ್ದು ಇಂಥ ಪ್ರಶಸ್ತಿಗಳ ಮೇಲೆ ಒಂದು ಚೂರು ಭರವಸೆ ಹುಟ್ಟಿಸಿತು. ಸಾಮಾನ್ಯವಾಗಿ ಪ್ರಶಸ್ತಿ ಬಂದಾಗ ಏನಾದರೂ ಒಂದು ಕೊಂಕು, ಅಪಸ್ವರ, (ಸರಿ ಆದ ಆಯ್ಕೆ ಇದ್ದಾಗಲೂ) ಇದ್ದೇ ಇರುತ್ತದೆ. ಆದರೆ, ಚಿಟ್ಟಾಣಿಯವರಿಗೆ ಈ ಪ್ರಶಸ್ತಿ ಬಂದಾಗ ಯಾವುದೇ ಅಪಸ್ವರ ಬರದಿರುವುದು ಚಿಟ್ಟಾಣಿಯವರ ಜನಪ್ರಿಯತೆಗೆ ಸಾಕ್ಷಿ.

ಚಿಟ್ಟಾಣಿಯವರು ಶಾಸ್ತ್ರಬದ್ಧವಾಗಿ ಕಲಿತವರಲ್ಲ. ಯಕ್ಷಗಾನವನ್ನು ನೋಡಿ, ಕೇಳಿ, ಅನುಕರಿಸಿ ಕಲಿತ ಒಬ್ಬ ಅಪ್ಪಟ ಜಾನಪದ ಕಲಾವಿದ. ಹಾಗಾಗಿ ಈ ಹಿಂದೆ ಅವರಿಗೆ ನೀಡಿದ ‘ಜಾನಪದ ಶ್ರೀ’ ಪ್ರಶಸ್ತಿ ಕೂಡ ಯೋಗ್ಯವಾದದ್ದೇ ಆಗಿತ್ತು. ಹುಟ್ಟಿದ್ದು ಗ್ರಾಮೀಣ ಕುಗ್ರಾಮದಲ್ಲಿ, ಕಲಿತದ್ದು ಎರಡನೇ ಈಯತ್ತೆ, ಬೆಳೆದದ್ದು ಬಡತನದಲ್ಲಿ. ಕುಟುಂಬದ ಹಿರಿಯರ್ಯಾರೂ ನಟರಲ್ಲ. .. . . ಇವೆಲ್ಲವೂ ವ್ಯಕ್ತಿಯ ಬೆಳವಣಿಗೆಯ ತೊಡಕುಗಳೇ. ಪ್ರತಿಭೆ, ಸಾಮಥ್ರ್ಯ ಇದ್ದೂ ವ್ಯಕ್ತಿಯೊಬ್ಬನಲ್ಲಿ ಕೀಳರಿಮೆ ಹುಟ್ಟಿಸುವ ಸಂಗತಿಗಳಿವು. ಆದರೆ ಚಿಟ್ಟಾಣಿಯವರು ಇದನ್ನೆಲ್ಲಾ ತನ್ನ ಸಾಧನೆಯ ಮೆಟ್ಟಿಲನ್ನಾಗಿಸಿಕೊಂಡರು. ಕಲೆಯ ಕುರಿತ ತಮ್ಮ ಬದ್ಧತೆ, ಪರಿಶ್ರಮದಿಂದ ಬೆಳೆದ ಎತ್ತರ ಮಾತ್ರ ಬೆರಗು ಹುಟ್ಟಿಸುವಂಥದು.

ಆಶ್ಚರ್ಯವೆಂದರೆ, ಅವರಿಗಿರುವ ನ್ಯೂನತೆಗಳನ್ನೆಲ್ಲ ಅವರು ತನ್ನ ಬೆಳವಣಿಗೆಯ ಅಸ್ತ್ರವನ್ನಾಗಿಸಿಕೊಂಡರು. ಉದಾಹರಣೆಗೆ ಅನಕ್ಷರತೆ ಮತ್ತು ಮಾತಿನ ತೊಡಕನ್ನೇ ನೋಡಿ. ತೆಂಕಿನ ಆರ್ಭಟದಲ್ಲಿ ಮಾತೇ ಯಕ್ಷಗಾನದ ಪ್ರಮುಖ ಅಂಗ ಎಂಬಂತೆ ಬಿಂಬಿತವಾದ ಕಾಲದಲ್ಲಿ ಚಿಟ್ಟಾಣಿಯವರಿಗೆ ‘ಮಾತು’ ಒಂದು ಸಮಸ್ಯೆ ಎಂದು ಪ್ರಚಾರ ಮಾಡಲಾಯಿತು. ಪ್ರಚಾರ ನಡೆದಷ್ಟು ಅಲ್ಲದಿದ್ದರೂ ನನಗೆ ಮಾತಿನ ತೊಡಕಿತ್ತು. ರಂಗದ ಮೇಲೆ ಹೋಗಿ ಏನು ತೋಚುತ್ತದೋ ಅದನ್ನೆಲ್ಲ ಹೇಳಿ ಬರುತ್ತಿದ್ದೆ. ಎಂದು ಅವರೇ ಹೇಳಿಕೊಂಡಿದ್ದಾರೆ. ಅಧ್ಯಯನ ಮಾಡೋಣವೆಂದರೆ, ಕಲಿತದ್ದೇ ಕಡಿಮೆ. ನಮ್ಮದೆಲ್ಲಾ ನೋಡಿ- ಕೇಳಿ ಕಲಿತದ್ದು. ಓದಿಲ್ದೆ ಏನೋ ನಡೆಯಿತು. ಆದರೆ ಹೊಸ ಕಲಾವಿದರು ಹೆಚ್ಚೆಚ್ಚು ಅಧ್ಯಯನ ಮಾಡಬೇಕು. ಎನ್ನುತ್ತಾರೆ. ಹೀಗೆ ಅವರಿಗೆ ಮಾತನಾಡಬೇಕೆನ್ನಿಸಿದೆ. ಅಧ್ಯಯನ ಮಾಡಬೇಕೆನ್ನಿಸಿದೆ ಅವರಿಗೆ: ಇವೆರಡೂ ತನ್ನ ನ್ಯೂನತೆಯೆಂದು ‘ಪದ್ಮಶ್ರೀ’ ಬಂದ ಮೇಲೂ ವಿನಯದಿಂದ ಒಪ್ಪಿಕೊಳ್ಳುವ ಚಿಟ್ಟಾಣಿಯವರು ಶಾಸ್ತ್ರೀಯ ಕಲಿಕೆ, ಅಕಾಡೆಮಿಕ್ ಅಧ್ಯಯನಗಳು ನಾಚುವಂತೆ ಭಾವಾಭಿನಯ, ವೈವಿಧ್ಯಮಯ ಕುಣಿತಕ್ಕೆ ಹೊರಳಿಕೊಂಡರು. ಅಭಿನಯ, ಕುಣಿತಗಳಲ್ಲೂ ಹೊಸಹೊಸ ಪಟ್ಟುಗಳನ್ನು ಅನ್ವೇಷಿಸಿದರು; ಸಾಕಾರಗೊಳಿಸಿದರು. ನೂರು ಮಾತು ಹೇಳಬಹುದಾದ್ದನ್ನು ಒಂದು ಕ್ಷಣದ ಮುಖಾಭಿನಯ, ಹಸ್ತಾಭಿನಯ, ಭಾವಾಭಿನಯ ಮಾಡಿತೋರಿಸಬಲ್ಲದು ಎಂಬುದನ್ನು ಅವರ ಹಲವು ಪಾತ್ರಗಳು ಸಿದ್ಧಪಡಿಸಿವೆ. ಕೌರವ ರಂಗ ಪ್ರವೇಶಿಸುವುದಾಗಲೀ, ಕಂಸ ಕನಸಿನಿಂದ ಎದ್ದೇಳುವುದಾಗಲೀ ಪಾಂಡವರಲ್ಲಿ ಯುದ್ಧಕ್ಕೆ ಒಬ್ಬರನ್ನು ಆಯ್ದುಕೊಳ್ಳುವುದಾಗಲೀ, ಭೀಮ ಬಿದ್ದಾಗ ಸಂಭ್ರಮ ಪಡುವುದಾಗಲೀ, ಕಾತರ್ಿವೀರ್ಯನ ಜಲಕ್ರೀಡೆಯಾಗಲಿ, ದುಷ್ಟ ಬುದ್ಧಿಯ ಕ್ರೌರ್ಯವಾಗಲೀ . . ಇಂಥ ಹಲವು ಸಂದರ್ಭಗಳಲ್ಲಿ ಚಿಟ್ಟಾಣಿಯವರ ಮಾತು ಕಡಿಮೆಯೆಂದು ಕಣ್ಣು ಮುಚ್ಚಿ ಯಕ್ಷಗಾನ ನೋಡುವವರು ಮಾತ್ರ ಹೇಳಲು ಸಾಧ್ಯ.

ಮಾಜಿ ರಾಷ್ಟ್ರಾಧ್ಯಕ್ಷೆ ಶ್ರೀಮತಿ ಪ್ರತಿಭಾ ಪಾಟೀಲರವರಿ೦ದ ಪದ್ಮಶ್ರೀ ಪ್ರಶಸ್ತಿಯನ್ನು ಪಡೆಯುತ್ತಿರುವ ಶ್ರೀ ಚಿಟ್ಟಾಣಿ ರಾಮಚ೦ದ್ರ ಹೆಗಡೆಯವರು.
ಹಾಗೆಯೇ ಪರಂಪರೆಯ ಜೊತೆಗಿನ ಅವರ ದ್ವಂದ್ವಾತ್ಮಕ ಸಂಬಂಧ ಕೂಡ ಗಮನೀಯ. ತನ್ನ ಬಾಲ್ಯದಲ್ಲಿ ಶಿವರಾಮ ಹೆಗಡೆ, ದೇವರು ಹೆಗಡೆ. ಮೂಡ್ಕಣಿ ನಾರಾಯಣ ಹೆಗಡೆ . . .ಮುಂತಾದವರ ದಟ್ಟ ಪ್ರಭಾವಕ್ಕೆ ಒಳಗಾದೆನೆಂದು ಹೇಳುತ್ತಾರೆ. ಏಕಲವ್ಯನಂತೆ (ಜಾತಿಯಿಂದಲ್ಲ) ಬೆಳೆದ ಚಿಟ್ಟಾಣಿಯವರು ಇವರಿಗೆಲ್ಲಾ ಗುರು ಸ್ಥಾನದ ಗೌರವ ಕೊಡುತ್ತಾರೆ. ಒಬ್ಬ ಪ್ರತಿಭಾವಂತ ಸಮರ್ಥ ಕಲಾವಿದ ಮಾತ್ರವೇ ಪರಂಪರೆಯ ಕೆಡುಕು-ಒಳಿತುಗಳನ್ನು ಸೂಕ್ಷ್ಮವಾಗಿ ಗ್ರಹಿಸಿ ಒಳಿತನ್ನು ಸೃಜನಾತ್ಮಕವಾಗಿ (ತನ್ನ ತನವನ್ನು ಬಿಡದೇ) ಅನುಕರಿಸುತ್ತಾರೆ. ಮಾತ್ರವಲ್ಲ ಈ ಪರಂಪರೆಗೆ ಹೊಸದನ್ನು ಸೇರಿಸುತ್ತಾ ಇನ್ನಷ್ಟು ಹೆಚ್ಚು ವೈವಿಧ್ಯ ಪೂರ್ಣವನ್ನಾಗಿಯೂ ಶ್ರಿಮಂತವನ್ನಾಗಿಯೂ ಮಾಡುತ್ತಾರೆ. ಆವರೆಗಿನ ಪರಂಪರೆಯನ್ನು ಯಥಾವತ್ತಾಗಿ ಅನುಕರಿಸುತ್ತಾ ಹೊಸ ಬದಲಾವಣೆಗೆ ತೆರೆದುಕೊಳ್ಳದ ಕಲಾವಿದನೊಬ್ಬ ಸಂಪ್ರದಾಯವಾದಿಯಂತೆ ಕಲೆಯ ಹಿನ್ನಡೆಗೆ ಕಾರಣನಾಗುತ್ತಾನೆ. ಅವನಿಂದ ಕಲೆಯ ಬೆಳವಣಿಗೆ ಸಾಧ್ಯವಿಲ್ಲ. ಆದರೆ ಇವರು ಇದಕ್ಕೆ ವ್ಯತಿರಿಕ್ತವಾಗಿ ಪರಂಪರೆಯ ಅಂಶಗಳನ್ನು ಹೀರಿಕೊಳ್ಳುತ್ತಲೇ ಈ ಪರಂಪರೆಗೆ ಹೊಸದನ್ನು ಸೇರಿಸಿದರು. ಪರಂಪರೆಯ ಮುನ್ನಡೆಗೆ ಕಾರಣರಾದರು. ಹಿಂದಿನ ಚೇತನಗಳು ಕ್ರಮಿಸಿದ ಮಾರ್ಗದಲ್ಲಿ ಮುನ್ನಡೆಯುತ್ತಲೇ ಸ್ವತಃ ಒಂದು ಮಾರ್ಗವನ್ನು ಸೃಷ್ಟಿಸಿದರು. ಹಾಗಾಗಿಯೇ ಅನೇಕ ಹೊಸ ಕಲಾವಿದರಿಗೆ ಚಿಟ್ಟಾಣಿಯವರ ಪ್ರಭಾವದಿಂದ ತಪ್ಪಿಸಿಕೊಳ್ಳುವುದು ಒಂದು ಪ್ರಯಾಸದ ಕೆಲಸವೇ ಆಗಿದೆ. ಚಿಟ್ಟಾಣಿಯವರ ಗ್ರೇಟ್ ನೆಸ್ ಇರುವುದೇ ಇಲ್ಲಿ.

****************


ಪದ್ಮಶ್ರಿ ಪ್ರಶಸ್ತಿ ಪ್ರಕಟವಾದ ಸಂದರ್ಭದಲ್ಲಿ ಚಿಟ್ಟಾಣಿ ರಾಮಚಂದ್ರ ಹೆಗಡೆರೊ೦ದಿಗೆ ವಿಠ್ಠಲ ಭಂಡಾರಿಯವರ ಸ೦ದರ್ಶನ


ಪ್ರಶ್ನೆ : ನಮ್ಮ ನಡುವಿನ ಪ್ರೀತಿಯ ಕಲಾವಿದರು ನೀವು. ನಿರಹಂಕಾರ, ಸಜ್ಜನಿಕೆ, ಪ್ರಯೋಗಶಿಲತೆ, ಎಲ್ಲಾ ವರ್ಗದ ಪ್ರೇಕ್ಷಕರನ್ನು ಪ್ರೀತಿಸುವ ಮನಸ್ಸು, ಕಲೆಯ ಕುರಿತಾದ ಬದ್ಧತೆ – ಇತ್ಯಾದಿಗಳಿಂದಾಗಿ ತಾವು ಈಗಾಗಲೆ ಜನ ಮಾನಸದಲ್ಲಿ ನೆಲೆನಿಂತಿದ್ದೀರಿ. ಈಗ ‘ಪದ್ಮಶ್ರೀ’ ಪ್ರಶಸ್ತಿ ನಿಮ್ಮನ್ನರಸಿ ಬಂದಿರುವುದಕ್ಕೆ ತಮಗೆ ಅಭಿನಂದನೆಗಳು. ಪ್ರಶಸ್ತಿ ಬಂದಾಗ ನಿಮಗೆ ಏನೆನ್ನಿಸಿತು ?

ಚಿಟ್ಟಾಣಿ : ನಾನು ಬಹಳ ಖುಶಿ ಪಟ್ಟಿದ್ದೇನೆ. ಯಾಕೆಂದರೆ ಈ ಪ್ರಸಸ್ತಿ ಯಕ್ಷಗಾನಕ್ಕೇ ಸಿಕ್ತಲ್ಲಾ. ನಮ್ಮ ಯಕ್ಷಗಾನ ಏನೆಂಬುದು ದೇಶಕ್ಕೆ ಗೊತ್ತಾಯ್ತಲ್ಲಾ,ಅದಕ್ಕೇ ಖುಶಿಯಾಯ್ತು. ಇದು ನನಗೆ ಬಂದ ಪ್ರಶಸ್ತಿ ಮಾತ್ರ ಅಲ್ಲ. ಯಕ್ಷಗಾನದ ಕಿರೀಟಕ್ಕೆ ಇನ್ನೊಂದು ಗರಿ ಮೂಡಿತು ಎಂದುಕೊಂಡಿದ್ದೇನೆ. ಯಕ್ಷಗಾನ ಕ್ಷೇತ್ರದಲ್ಲಿ ನಾನು ಈವರೆಗೆ ನಡೆಸಿದ ದುಡಿತಕ್ಕೆ ದೇವರು ಈ ರೀತಿಯಲ್ಲಿ ಪ್ರತಿಫಲ ಕೊಟ್ಟ. ಸಾವಿರಸಾವಿರ ಪ್ರೇಕ್ಷಕರ ಮನದಲ್ಲಿ ಇರಬೇಕೆಂಬ ಆಸೆ ಇತ್ತು. ಆ ಆಸೆ ಕೂಡ ಈಡೇರಿದೆ.

ಚಿಟ್ಟಾಣಿ ಹಾಗೂ ಕುಟು೦ಬ

ಪ್ರಶ್ನೆ : ತಮ್ಮ ಕುಟುಂಬದ ಹಿನ್ನೆಲೆ ಹೇಗಿತ್ತು ? ಯಕ್ಷಗಾನ ಕಲಿಕೆಗೆ ಪೂರಕ ವಾತಾವರಣ ಇತ್ತೆ?

ಚಿಟ್ಟಾಣಿ : ಮನೆಯಲ್ಲಿ ತಿರಾ ಬಡತನ. ವ್ಯವಸಾಯ ಮಾಡ್ತಾ ಇದ್ರು. ನಾನು ಹೆಚ್ಚು ಕಲೀಲಿಲ್ಲ. ಎರಡನೆ ತರಗತಿ. ನನ್ನ ಅಕ್ಕ ಪಾಟಿ ಮೇಲೆ ಬರೆದು ಕೊಡ್ತಿದ್ಳು. ನಾನು ಅದನ್ನೇ ಬರೆದು ಮಾಸ್ತರರಿಗೆ ತೋರಿಸ್ತಿದ್ದೆ. ಹಾಗಾಗಿ ಅಕ್ಷರ ಕಲಿಲಿಲ್ಲ. ರಾತ್ರಿ ಆಟ ನೋಡ್ತಿದ್ದೆ. ಮರುದಿನ ಮನೆ ಹಿಂದಿನ ಗುಡ್ಡ ಹತ್ತಿ ಗೇರು ಮರದ ಅಡಿಯಲ್ಲಿ ನಾನು ಕುಣಿಯುತ್ತಿದ್ದೆ. ನನಗೆ ಮೊದಲಿನಿಂದ ಭಜನೆಯ ತಾಳ ಗೊತ್ತಿತ್ತು. ಹಾಗಾಗಿ ಬಾಯಲ್ಲಿ ತಾಳ ಹೇಳ್ತಾ ಕುಣಿತಿದ್ದೆ. ನಂತರ ಶಿವರಾಮ ಹೆಗಡೆಯವರ ಪ್ರಭಾವ ಹೆಚ್ಚಾಯಿತು. ಕೊಂಡದಕುಳಿ ರಾಮ ಹೆಗಡೆ, ಲಕ್ಷ್ಮಣ ಹೆಗಡೆ, ಮೂರುರು ದೇವರು ಹೆಗಡೆ. . . .ಮುಂತಾದವರ ಪ್ರಭಾವ ನನ್ನ ಏಳ್ಗೆಗೆ ಕಾರಣ ಆಯ್ತು. ನಾನು ಒಬ್ಬ ಕಲಾವಿದ ಆಗ್ಬೇಕು ಎಂಬ ಛಲ ಬಂತು. ಆ ಸಮಯಕ್ಕೆ ಬಾಳೆಗದ್ದೆ ರಾಮಕೃಷ್ಣ ಭಟ್ಟರು ಗುರುಗಳಾಗಿ ಸಿಕ್ಕಿದ್ರು. ನಾನು ಅವರಲ್ಲಿ ಒಂದುವರೆ ಟ್ರಾಯಲ್ಲಿಗೆ ಮಾತ್ರ ಹೋಗಿದ್ದು. ನೋಡಿ, ಕೇಳಿ ಕಲ್ತಿದ್ದೇ ಹೆಚ್ಚು.

ಪ್ರಶ್ನೆ : ಮೊದಲ ವೇಷ ಯಾವ್ದು?

ಚಿಟ್ಟಾಣಿ : ಪಾರಿಜಾತ ಪರಿಣಯದಲ್ಲಿ ಅಗ್ನಿ. ಮೂರೆ ಪದ್ಯ. ಆಮೇಲೆ ಗುಂಡಬಾಳದಲ್ಲಿ ಆಂಜನೇಯ.

ಪ್ರಶ್ನೆ : ಮಂಜ ಭಾಗ್ವತರು ನಿಮ್ಗೆ ಕಲಾದರನ ಪಾತ್ರ ಕೊಟ್ಟ ಬಗ್ಗೆ ಕೇಳಿದ್ದೆ ?

ಚಿಟ್ಟಾಣಿ : ಹೌದು. ಆಗ ನಾನು ದೇವರಹೆಗಡೆಯವರ ಮನೆಲಿದ್ದೆ. ಅವರು ನನಗೆ ಪದ್ಯ ಇದ್ದ ಪಾತ್ರ ಕೊಡ್ತಿರಲಿಲ್ಲ. ದ್ವೇಷ ಅಲ್ಲ. ಆಟ ಹಾಳಾಗಬಾದರ್ು ಅಂತ. ಆದರೆ ಕೊಳಗಿಬೀಸ್ ಮೇಳದಲ್ಲಿ ‘ಭೋಜ ಕಾಳಿದಾಸ’ ಪ್ರಸಂಗದಲ್ಲಿ 5 ಪದ್ಯ ಇರುವ ಕಲಾದರನ ಪಾತ್ರ ಮಾಡುವವರಿರಲಿಲ್ಲ. ಮಂಜ ಭಾಗ್ವತ್ರು ಈ ಹೊಸಾಕುಳಿ ಮಾಣಿ ಮಾಡಲಿ ಎಂದು ನನ್ನ ತೋರಿಸಿದರು. ಆಗ ದೇವರ ಹೆಗ್ಡೆರು ಆಗ್ತಿಲ್ಲೆ .. .. ಮಂಜ ಆಗ್ತಿಲ್ಲೆ. ಒಳ್ಳೆ ಶೃಂಗಾರದ ಪದ್ಯ ಅದು. ಪ್ರಸಂಗ ಹಾಳಾಗೋಗ್ತು ಅಂದರು. ಆದ್ರೆ ಪಟ್ಟು ಬಿಡದ ಮಂಜ ಭಾಗ್ವತರು ನನ್ನಿಂದ ಸರಿಯಾಗೇ ಮಾಡಿಸುವ ಜವಾಬ್ದಾರಿ ಹೊತ್ತರು. ನಾನು ಚೆನ್ನಾಗಿಯೇ ಮಾಡ್ದೆ. ಇದನ್ನು ನೋಡಿದ ತುಡುಗುಣಿ ಮಾಬ್ಲೇಶ್ವರ ಭಟ್ಟರು ಇನ್ನು ಮುಂದೆ ಕಲಾಧರನ ಪಾತ್ರವನ್ನು ಹೊಸಾಕುಳಿ ಮಾಣಿಗೆ ಕೊಡಬೇಕೆಂದು ತಾಕೀತು ಮಾಡಿದರು. ಊರ ಹೆಗ್ಡೆರು, ಗೌಡ್ರ ಮಾತನ್ನು ಯಾರೂ ವಿರೋಧಿಸ್ತಿರಲಿಲ್ಲ. ಯಾಕೆಂದ್ರೆ ಅವರಿಲ್ಲದಿದ್ರೆ ಊರಲ್ಲಿ ಆಟನೇ ಆಗ್ತಿರಲಿಲ್ಲ. ಆಗ ಒಂದೊಂದೂರಲ್ಲಿ 8-9 ಆಟ ದಿನಬಿಟ್ಟು ದಿನ ಆಗೋದು.

ಪ್ರಶ್ನೆ : ಕುಣಿಯಲು ಪ್ರಾರಂಭ ಮಾಡಿದ ಕಾಲ ಹೇಗಿತ್ತು?

ಚಿಟ್ಟಾಣಿ : ಯಾರೂ ಸರಿಯಾಗಿ ಮಾತಾಡಿಸ್ತಿರಲಿಲ್ಲ. ನಮ್ಮ ಸಾಮಾನನ್ನು ನಾವೇ ತಲೆಮೇಲೆ ಹೊತ್ಗೊಂಡು 9-10 ಮೈಲು ನಡೆಬೇಕು. ಕುಣಿಯಲು ಹೋದದ್ದು ಗೊತ್ತಾದ್ರೆ ಅಪ್ಪ ಬೈತಿದ್ದ. ಹಾಗಾಗಿ ರಾತ್ರಿ ಎಲ್ಲಾ ಕುಣಿದು ಬೆಳಿಗ್ಗೆ ಒಂದು ದಕರ್ಿನ ಕಲ್ಲಿ ತಲೆಮೇಲೆ ಹೊತ್ಗೊಂಡು ಮನೆಗೆ ಬರಬೇಕಾಗಿತ್ತು. ಅಪ್ಪ ತೀರಿಕೊಂಡ ನಂತರ ಸಂಸಾರದ ಜವಾಬ್ದಾರಿ ನನ್ನ ತಲೆಮೇಲೆ ಬಂತು. ಸುಮಾರು 14 ವರ್ಷ ಹೊಸಾಕುಳಿ, ಹರಿಕೆರೆ, ಸಾಲ್ಕೊಡು. . . ಗಳಲ್ಲಿ ಅಡಿಕೆ ಮರಕ್ಕೆ ಮದ್ದು ಹೊಡೆಯೋದು,ಕೊಟ್ಟಕೊನೆ ಮಾಡೋದು ಮಾಡ್ತಿದ್ದೆ. ಆದರೂ ಯಕ್ಷಗಾನದ ಆಕರ್ಷಣೆ ಕಡಿಮೆ ಆಗಲಿಲ್ಲ.

ಪ್ರಶ್ನೆ : ತಮ್ಮ ಮೊದಲ ಸಂಪಾದನೆ ಎಷ್ಟಿತ್ತು ಅಂಥ ನೆನಪಿದೆಯಾ? ಇತ್ತೀಚೆಗೆ ?

ಚಿಟ್ಟಾಣಿ : ಮೊದಲು ಎಂಟಾಣೆ ಇತ್ತು. ದೇವರ ಹೆಗ್ಡೆರು ಎರಡು ರೂಪಾಯಿ ಕೊಡ್ತಿದ್ದರು. ನಾರಾಯಣ ಭಟ್ಟರಯ 50 ರೂಪಾಯಿ ಕೊಟ್ಟರು. ನಂತರ 75 ರೂ, 200, 300. ಕೊನೆಗೆ ನನ್ನಷ್ಟು ಯಾರೂ ತೆಗೆದು ಕೊಳ್ತಿರಲಿಲ್ಲ. ಈಗೆಲ್ಲಾ 7-8 ಸಾವಿರ ಕೊಡೊದೂ ಇದೆ.

ಪ್ರಶ್ನೆ : ಪ್ರತಿ ದಿನ ರಂಗದ ಮೇಲೆ ಹೋದಾಗ ಏನೆನ್ನಿಸ್ತದೆ?

ಚಿಟ್ಟಾಣಿ : ನನ್ನ ಎಲ್ಲಾ ನೋವು ಜಂಜಾಟಗಳನ್ನು ಮರೆತೇನೆ. ಹಣ ಕೊಟ್ಟು ಬಂದ ಪ್ರೇಕ್ಷಕರ ನಿರೀಕ್ಷೆ ಹುಸಿ ಆಗದಂತೆ ಪಾತ್ರ ಮಾಡೋದು ನನ್ನ ಕರ್ತವ್ಯ ಅಂದ್ಕೋತೆನೆ. ಒಬ್ಬನೇಒಬ್ಬ ನನ್ನ ಅಭಿಮಾನಿ ಎದುರಿಗೆ ಇದ್ದರೂ ನಾನು ಅವನಿಗೆ ಮೋಸ ಆಗದಂತೆ ನಿಷ್ಠೆಯಿಂದ ನಟಿಸ್ತೇನೆ. ಚಿಟ್ಟಾಣಿಯವರಿಗೆ ವಯಸ್ಸಾಯ್ತು. ಮೊದಲಿನ ಹಾಗೆ ಮಾಡ್ತಿಲ್ಲ ಅಂತ ಬೇಸರ ಪಡ್ತಾರೊ ಅಂತ ಭಯ; ಪ್ರತಿ ಸಲವೂ ಭಯ ಆಗ್ತದೆ. ಜೀವನದ ಕೊನೆವರೆಗೂ ನನ್ನ ಕೈಲಾದಷ್ಟು ಕೊಡ್ಬೇಕು ಅಂಥ ಅಂದ್ಕೊಂಡಿದ್ದೆ. ಕೊಟ್ಟ ತೃಪ್ತಿ ಇದೆ.

ಜಲವಳ್ಳಿ ವೆಂಕಟೇಶ್ ರಾವ್

ಪ್ರಶ್ನೆ : ನಿಮ್ಮ ಮಾತಿನಲ್ಲಿ ಸ್ವಲ್ಪ ತೊಡಕಿದೆ ಎಂಬ ಮಾತಿದೆ. ಅದನ್ನು ಮೀರುವುದಕ್ಕಾಗಿ ಕುಣಿತ, ಭಾವಾಭಿನಯಕ್ಕೆ ಹೆಚ್ಚು ಒತ್ತು ಕೊಟ್ಟಂತೆ ಕಾಣುತ್ತದೆ.?

ಚಿಟ್ಟಾಣಿ : ಖಂಡಿತವಾಗಿಯೂ ಹೌದು. ಮೊದಲು ನನಗೆ ಈ ತೊಡಕಿತ್ತು. ರಂಗದ ಮೇಲೆ ಹೋದಾಗ ಏನು ತೋಚುತ್ತದೋ ಅದನ್ನು ಹೇಳುತ್ತಿದ್ದೆ. ಆನಂತರ ಯೋಚಿಸಿ ಹೇಳುವುದನ್ನು ರೂಢಿಸಿಕೊಂಡೆ. ಅಭಿನಯ , ಕುಣಿತದಲ್ಲಿ ಹೆಚ್ಚೆಚ್ಚು ಸಾಧನೆಗೆ ತೊಡಗಿದೆ. ಪ್ರತಿ ಪಾತ್ರವನ್ನು ಹೊಸದಾಗಿಯೆ ಕಟ್ಟಲು ಪ್ರಾರಂಭಿಸಿದೆ. ಪಾತ್ರ ಗುಣಕ್ಕೆ ಅನುಗುಣವಾಗಿ ಅಭಿನಯದಲ್ಲಿ ಭಿನ್ನತೆ ಬೇಕು. ಉದಾಹರಣೆಗೆ ಕೃಷ್ಣನ ಶೃಂಗಾರಾಭಿನಯದಲ್ಲಿ . ಭಸ್ಮಾಸುರನ ಶೃಂಗಾರಾಭಿನಯದಲ್ಲಿ ವ್ಯತ್ಯಾಸ ಇದೆ. ಎರಡೂ ಒಂದೇ ಅಲ್ಲ. ಹಾಗೆ ಯಕ್ಷಗಾನದಲ್ಲಿ ಬರೀ ಮಾತೆ ಮುಖ್ಯವಲ್ಲ. ಹರಿದಾಸರು ಇಲ್ಲಿ ಪ್ರವೇಶಿಸಿದ ಮೆಲೆ ಮಾತೇ ಮುಖ್ಯವಾಯಿತು.

ಪ್ರಶ್ನೆ : ನಿಮಗೆ ತೀರಾ ಖುಶಿ ಕೊಟ್ಟ ಜೋಡಿ ಪಾತ್ರಧಾರಿಗಳು ಯಾರು ?

ಚಿಟ್ಟಾಣಿ : ಕೆರೆಮನೆ ಶಿವರಾಮ ಹೆಗಡೆಯವರು. ಆನಂತರ ಜಲವಳ್ಳಿ ವೆಂಕಟೇಶ್. ಆತ ಅದ್ಭುತ. ಅವನ ಈಶ್ವರ ನನ್ನ ಭಸ್ಮಾಸುರ; ನನ್ನ ಈಶ್ವರ ಅವನ ಯಮ; ಅವನ ರಕ್ತಜಂಗಾಸುರ ನನ್ನ ರುದ್ರಕೋಪ; ಅವನ ಭೀಮ ನನ್ನ ಕೌರವ. ಕೆಲವು ಪಾತ್ರಗಳು ಅವನದೇ. ಅವನು ಈಶ್ವರನಾಗಿ ಇರುವವರೆಗೆ ರಂಗ ಅವನದೇ. ನಂತರ ಮೋಹಿನಿಯೊಂದಿಗೆ ಚಿಟ್ಟಾಣಿ ಬೆಳಗಬೇಕು.

ಪ್ರಶ್ನೆ : ಅವರ ಮತ್ತು ನಿಮ್ಮ ಹಿನ್ನೆಲೆ ಒಂದೇ ರೀತಿ ಇತ್ತು. ಸ್ವಯಂ ಕಲಿಕೆಯಿಂದ ನೀವಿಬ್ಬರು ಮೇಲೆ ಬಂದವರು.

ಚಿಟ್ಟಾಣಿ : ಹೌದು. ಅವನೂ ಹೆಚ್ಚು ಅಕ್ಷರ ಕಲಿಯಲಿಲ್ಲ. ರಂಗದ ಮೇಲೋ.. .. .. ಮೂರು ಸುತ್ತು ಒಂದು ಗತ್ತು. ಆ ಲಯ ಎಂಥದ್ದು ಅದು. ಆದರೆ ಜಂಪೆಗೂ ಅದೇ ಗತ್ತು. ತ್ರಿವುಡೆಗೂ ಅದೇ ಗತ್ತು. ಆದರೆ ಲಯ ಆಚೀಚೆ ಆಗೋದಿಲ್ಲ. ಮೊದ್ಲು ಅವನು ಕುಣಿತಿದ್ದ. ಹೆಣ್ಣವೇಷ ಮಾಡ್ತಿದ್ದ. ಯಾವಾಗ ತೆಂಕಿಗೆ ಹೋದ್ನೊ. ಕುಣಿತ ಗೋವಿಂದ. (ಏಕ ವಚನದ ಆತ್ಮೀಯತೆ ಖುಶಿಕೊಡುವಂತಿತ್ತು)

ಪ್ರಶ್ನೆ : ಹೊಸ ಪ್ರಸಂಗಗಳಿಗೆ ಹೇಗೆ ಒಗ್ಗಿಕೊಂಡಿರಿ?

ಚಿಟ್ಟಾಣಿ : ಅನಿವಾರ್ಯ ಆಯ್ತು. ನನಗೆ ಅದು ಎಂದೂ ಮಾನಸಿಕ ಖುಶಿ ಕೊಟ್ಟಿಲ್ಲ. ಯಕ್ಷಗಾನದ ಒಟ್ಟಾರೆ ಬೆಳವಣಿಗೆಗೆ ಅದು ಪೂರಕವಲ್ಲ. ಅದು ಒಬ್ಬ ನಟನನ್ನು ಬೆಳೆಸುವುದಿಲ್ಲ. ಜನ ನೋಡಿ ಚಪ್ಪಾಳೆ ಹೊಡೆಯಬಹುದು ಅಷ್ಟೆ. ಆದರೆ ನನಗೆ ತೃಪ್ತಿ ಇಲ್ಲ. ಆದರೆ ಮೇಳದ ಯಜಮಾನರ ದೃಷ್ಟಿಯಿಂದ, ಕಲಾವಿದರ ಬದುಕಿ ದೃಷ್ಟಿಯಿಂದ ಹಲವು ಬಾರಿ ಒಪ್ಪಿಕೊಳ್ಳಬೇಕಾಗುತ್ತದೆ.

ಪ್ರಶ್ನೆ : ಮೇಳ ಕಟ್ಟಿ ಯಜಮಾನರಾಗಿದ್ರಿ ?

ಚಿಟ್ಟಾಣಿ : ಲಾಸ್ ಆಯ್ತು. ಐದು ವರ್ಷ ನಡೆಸಿದೆ. ನಟನೆಯ ಕಡೆ, ಮೇಳದ ಕಡೆ ಏಕಕಾಲದಲ್ಲಿ ಗಮನ ಹರಿಸಲು ಸಾಧ್ಯ ಆಗಲಿಲ್ಲ. ಕೆಲವು ಕಲಾವಿದರನ್ನು ಸಂಬಾಳಿಸುವುದು ಕಷ್ಟವಾಯಿತು. ಮಹಾಬಲ ಹೆಗಡೆಯವರಂತ ಒಳ್ಳೆಯ ಕಲಾವಿದರು ನಮ್ಮ ಮೇಳದಲ್ಲಿದ್ದರು. ಹಲವು ಸಂದರ್ಭದಲ್ಲಿ ಅವರು ಹೇಳಿದಂತೆ ಆಗಬೇಕು ಎನ್ನುವವರು ಅವರು. ನಡೆಸಿದಷ್ಟು ದಿನ ಚೆನ್ನಾಗಿಯೇ ನಡೆಸಿದೆ. ಮೇಳ ನಿಲ್ಲಿಸಲು ಪ್ರೇಕ್ಷಕರ ಕೊರತೆಯಾಗಲಿ, ಅಸಹಕಾರವಾಗಲಿ ಕಾರಣ ಆಗಿರಲಿಲ್ಲ. ನನಗೆ ವ್ಯವಹಾರ ಬರ್ತಿರಲಿಲ್ಲ.

ಪ್ರಶ್ನೆ : ನೀವು ಶಿರ್ಸಿಯಲ್ಲಿ, ಕುಮಟಾದಲ್ಲಿ ಯಕ್ಷಗಾನದ ಸ್ಪರ್ಧೆಗೆ ಇಳಿದದ್ದು ನಮಗೆಲ್ಲಾ ಸರಿಕಂಡಿರಲಿಲ್ಲ. ನೀವು ನಿರ್ಣಾಯಕ ಸ್ಥಾನದಲ್ಲಿದ್ದವರು…….ಯಕ್ಷಗಾನದಲ್ಲಿ ನಿಮ್ಮ ಸ್ಥಾನ ಪಿಕ್ಸ ಆಗಿದೆ ಎಂದು ಸಂಘಟಕರಿಗೆ ಅನಿಸಲೇ ಇಲ್ವಾ?

ಚಿಟ್ಟಾಣಿ : ಬಂದು ಕರೆದಾಗ ಇಲ್ಲಾ ಅಂತ ಹೇಳಲು ಆಗುವುದಿಲ್ಲ. ನನ್ನನ್ನ ಕರೆಯಬೇಕೊ ಬೇಡ್ವೊ ಎಂದು ಸಂಘಟಕರು ತೀರ್ಮಾನಿಸಬೇಕಿತ್ತು.

ಪ್ರಶ್ನೆ : ಯುವ ಕಲಾವಿದರ ಬಗ್ಗೆ ಏನೆನ್ನಿಸ್ತಿದೆ?

ಚಿಟ್ಟಾಣಿ : ಯಕ್ಷಗಾನಕ್ಕಂತೂ ಅಳಿವಿಲ್ಲ. ಅದು ಮುಂದರಿಯುತ್ತದೆ. ಹೇಗೆ ತಯಾರಾಗ್ಬೇಕು ಅಂತ ಯೋಚಿಸಬೇಕು. ಹೊಸ ಕಲಾವಿದರು ಅಧ್ಯಯನ ಮಾಡ್ಬೇಕು. ನಮ್ಮದು ಹೇಗೋ ಆಯ್ತು. ನೋಡಿ ಕೇಳಿ, ಕಲ್ತಿದ್ದಾಯ್ತು. ಆಂಗಿಕಾಭಿನಯ, ಭಾವಾಭಿನಯಕ್ಕೆ ಸಂಬಂಧ ಇರಬೇಕು. ಪಾತ್ರದಲ್ಲಿ ಪೂರ್ಣ ತಲ್ಲೀನ ಆಗ್ಬೇಕು. ಹೊಸ ಪ್ರಸಂಗಗಳು ಅವರ ಬೆಳವಣಿಗೆಗೆ ಅಡ್ಡಿ ಆಗಿದೆ. ಅದನ್ನು ಮೀರಿಬೆಳೆಯಬೇಕು. ಇದಕ್ಕೆ ಕಲೆಯ ಮೇಲೆ ಪ್ರೀತಿ,ನಿಷ್ಠೆ ಬೆಳೆಸಿಕೊಳ್ಳ ಬೇಕು.

****************

ಹೀಗೆ ಮಾತುಕತೆ ಮುಂದುವರಿಯುತ್ತಲೇ ಇತ್ತು. ತನ್ನ ಬೆಳವಣಿಗೆಯಲ್ಲಿ ಹೆಂಡತಿ ಸುಶೀಲಾರ ಪಾತ್ರ ಮಹತ್ವದ್ದೆಂದು ಅಭಿಮಾನದಿಂದ ಹೇಳಿದರು. ಅವರೂ ಮಾತಿಗೆ ಬಂದು ನಿಂತರು. ಗಂಡನ ಬಗ್ಗೆ ಅಭಿಮಾನ ವ್ಯಕ್ತ ಪಡಿಸಿದರು ಮಾತ್ರವಲ್ಲ ತಾನು ಚಿಟ್ಟಾಣಿಯವರನ್ನು ಮೊದಲು ನೋಡಿದ ದಿನಗಳನ್ನು,ಅವರ ಪಾತ್ರನೋಡಿ ಮೆಚ್ಚಿದ ದಿನಗಳನ್ನು ನೆನಪಿಸಿಕೊಂಡು ಹೇಳಿದಾಗ ಚಿಟ್ಟಾಣಿಯವರೂ ಸೇರಿ ನಾವೆಲ್ಲಾ ಹೊಟ್ಟೆ ತುಂಬ ನಕ್ಕೆವು. ಮುಕ್ತಾಯದ ಹಂತದಲ್ಲಿರುವ ಹೊಸ ಮನೆ ತೋರಿಸಿದರು. ಈ ವರೆಗೆ ಬಂದ ಪ್ರಶಸ್ತಿ, ನೆನಪಿನ ಕಾಣಿಕೆಗಳನ್ನೆಲ್ಲಾ ತೋರಿಸಿದರು. ನಾಲ್ಕಾರು ಫೋಟೊ ಕ್ಲಿಕ್ಕಿಸಿಕೊಂಡು ಮತ್ತೊಮ್ಮೆ ಶುಭಾಶಯ ಹೇಳಿ ಮನೆಯ ಕಡೆ ಹೊರಟಾಗ ಚಿಟ್ಟಾಣಿಯವರ ‘ನೀಲ ಗಗನದೊಳು ನವಿಲು ಕುಣಿಯುತಿದೆ ನೋಡು’ ಪದ್ಯದ ನವಿಲ ಕುಣಿತ ಕಣ್ಮುಂದೆ ಬರುತ್ತಿತ್ತು



ಕೃಪೆ : www.avadhimag.com


Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ